
ಹರಿಹರ: ಅಪಾಯ ಮಟ್ಟ ಮೀರಿ ಹರಿಯುತ್ತಿರುವ ತುಂಗಾಭದ್ರಾ ನದಿ; ಉಕ್ಕಡಗಾತ್ರಿ ದೇವಸ್ಥಾನ ಸ್ನಾನ ಘಟ್ಟಕ್ಕೆ ನುಗ್ಗಿದ ನೀರು..!!
ದಾವಣಗೆರೆ: ಮಲೆನಾಡಿನಲ್ಲಿ ಭಾರೀ ಪ್ರಮಾಣದ ಮಳೆಯಾಗುತ್ತಿದೆ. ಈ ಹಿನ್ನೆಲೆ ಜಿಲ್ಲೆಯ ಹರಿಹರ ತಾಲ್ಲೂಕಿನ ಉಕ್ಕಡಗಾತ್ರಿ ಗ್ರಾಮದ ಬಳಿ ತುಂಗಭದ್ರಾ ನದಿ ಅಪಾಯ ಮಟ್ಟ ಮೀರಿ ಉಕ್ಕಿ ಹರಿಯುತ್ತಿದೆ. ಇದರ ಪರಿಣಾಮ ಉಕ್ಕಡಗಾತ್ರಿಯ ಪವಾಡಪುರುಷ ಶ್ರೀ ಕರಿಬಸವೇಶ್ವರ ದೇವಸ್ಥಾನ ಸ್ನಾನ ಘಟ್ಟ ಹಾಗೂ ಅಂಗಡಿ ಪ್ರದೇಶಕ್ಕೆ ನೀರು ನುಗ್ಗಿದೆ.
ಜಿಲ್ಲೆಯ ಹೊನ್ನಾಳಿ, ಹರಿಹರ ಸೇರಿದಂತೆ ನದಿ ಪಾತ್ರದ ತಗ್ಗು ಪ್ರದೇಶಗಳು ಮುಳುಗಡೆಯಾಗಿವೆ. ಉಕ್ಕಡಗಾತ್ರಿಗೆ ಪ್ರವೇಶ ಮಾರ್ಗ ಸಹ ಮುಳುಗಡೆಯಾಗಿದೆ. ಅಲ್ಲದೇ ದೇವಾಲಯದ ಮುಂಭಾಗದವರೆಗೂ ನೀರು ಬಂದಿದೆ. ಗಾಜನೂರಿನ ತುಂಗಾಜಲಾಶಯ ತುಂಬಿ ನದಿಗೆ ಸುಮಾರು 55 ಕ್ಯೂಸೆಕ್ ಗಿಂತಲೂ ಹೆಚ್ಚು ನೀರು ನದಿಗೆ ಬಿಡುತ್ತಿರುವುದರಿಂದ ಮಲೇಬೆನ್ನೂರು ಸಮೀಪದ ಉಕ್ಕಡಗಾತ್ರಿ ಗ್ರಾಮವು ತುಂಗಾಭದ್ರಾ ನದಿಯ ಶ್ರೀ ಕರಿಬಸವೇಶ್ವರ ದೇವಸ್ಥಾನದ ಜವಳದ ಕೊಠಡಿಗಳು, ಹಣ್ಣುಕಾಯಿ ಅಂಗಡಿಗಳು, ಗಣೇಶನ ಮೂರ್ತಿ ಮತ್ತು ಪತ್ತೇಪುರ ಮಾರ್ಗವಾಗಿ ಉಕ್ಕಡಗಾತ್ರಿಗೆ ಹೋಗುವ ರಸ್ತೆ ಹಾಗೂ ನೂರಾರು ಎಕರೆ ಗೆದ್ದೆ, ತೋಟಗಳು ಮುಳುಗಡೆಯಾಗಿವೆ.
ಉಕ್ಕಡಗಾತ್ರಿ ಭಾಗಕ್ಕೆ ಪ್ರವೇಶಿಸುವ ರಸ್ತೆಗೆ ಸೂಕ್ತ ಸೇತುವೆ ಮಾಡಿಸಿ ಎಂದು ದಶಕಗಳಿಂದ ಹೋರಾಟ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರತಿ ವರ್ಷ ನದಿಯಲ್ಲಿ ನೀರು ಹೆಚ್ಚಾದಾಗ ಎರಡು ರಸ್ತೆಗಳು ಬಂದ್ ಆಗಿ ಜನರಿಗೆ ತೊಂದರೆಯಾಗುತ್ತದೆ ಎಂದು ಜನ ಆಕ್ರೋಶ ಹೊರಹಾಕಿದ್ದಾರೆ. ಮಳೆಯ ಅಬ್ಬರದಿಂದ ಹೊನ್ನಾಳಿ, ಹರಿಹರ ಸೇರಿದಂತೆ ಹಲವು ಕಡೆಗಳಲ್ಲಿ ವಸತಿ ಪ್ರದೇಶಕ್ಕೆ ನದಿಯ ನೀರು ನುಗ್ಗುವ ಆತಂಕ ಎದುರಾಗಿದೆ.