Kolar: ಮೈತುಂಬಾ ಹೂ ಮುಡಿದು ನಿಂತ ಮಾವಿನ ಮರಗಳು- ಲಾಭದ ನಿರೀಕ್ಷೆಯಲ್ಲಿ ಕೋಲಾರ ಬೆಳೆಗಾರರು
ಕಳೆದ ವರ್ಷ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಬಿದ್ದ ಮಳೆಗೆ ಮಾವಿನ ಮರಗಳು ಮೈತುಂಬ ಹೂ ಮುಡಿದು ನಿಂತಿವೆ. ವರ್ಷಕ್ಕೆ ಒಂದೇ ಬೆಳೆಯಲ್ಲಿ ಬದುಕು ಕಟ್ಟಿಕೊಳ್ಳುವ ಈ ಭಾಗದ ಮಾವು ಬೆಳೆಗಾರರು ಈಗ ಬಿಟ್ಟಿರುವ ಹೂವಿನ ಪ್ರಮಾಣದಷ್ಟೇ ಕಾಯಿ ಬಿಡುವ ನಿರೀಕ್ಷೆಯಲ್ಲಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.ಕೋಲಾರ: ವಸಂತ ಕಾಲ ಆರಂಭವಾಗುತ್ತಿದ್ದು, ಕೋಲಾರ ಜಿಲ್ಲೆಯಲ್ಲಿ(Kolar District) ಮಾಮರದ ಕಂಪು ಸೂಸುತ್ತಿದೆ. ಮೈತುಂಬಾ ಹೂ ಮುಡಿದು ನಿಂತಿರುವ ಮಾವಿನ ಮರಗಳು ನೋಡುಗರ ಮನ ಸೆಳೆಯುತ್ತಿವೆ. ಇದರಿಂದ ಮಾವು ಬೆಳೆದ ರೈತರು ಈ ಬಾರಿ ಭರ್ಜರಿ ಇಳುವರಿ ಕಾಣುವ ನಿರೀಕ್ಷೆಯಲ್ಲಿದ್ದಾರೆ. ಹೌದು, ಕೋಲಾರ ಜಿಲ್ಲೆಯ ಶ್ರೀನಿವಾಸಪುರ(Srinivasapura) ಪ್ರಪಂಚದ ಪ್ರಸಿದ್ದ ಮಾವಿನ ನಗರಿ, ತವರು ಎಂದೇ ಹೆಸರುವಾಸಿಯಾಗಿದೆ. ಹಾಗಾಗಿ ಇಲ್ಲಿ ಬೆಳೆಯುವ ಮಾವು(Mango Crop) ಇಡೀ ದೇಶದಲ್ಲೇ ಪ್ರಸಿದ್ದಿ ಪಡೆದಿದೆ. ಇಲ್ಲಿನ ರೈತರು ಬೆಳೆಯುವ ಬಾದಾಮಿ, ರಾಜಗೀರಾ, ಬೇನಿಷಾ, ನೀಲಂ, ತೋತಾಪುರಿ, ಸೇಂದೂರಾ ಸೇರಿದಂತೆ ಇನ್ನು ಹಲವು ಬಗೆ ಬಗೆಯ ಮಾವಿನ ಹಣ್ಣುಗಳು ದೇಶ ವಿದೇಶಗಳಿಗೆ ರಫ್ತಾಗುತ್ತವೆ(Export).