
ಹಾವೇರಿ | ಕ್ರಿಕೆಟ್ ಬೆಟ್ಟಿಂಗ್:
ನಾಲ್ವರು ವಶಕ್ಕೆ
ಹಾವೇರಿ: ಜಿಲ್ಲೆಯ ಸವಣೂರು ಹಾಗೂ ಅಡೂರು ಠಾಣೆ ವ್ಯಾಪ್ತಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
'ಸವಣೂರು ಪಟ್ಟಣದ ಕಾರಡಗಿ ಕ್ರಾಸ್‌ನಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಮಹ್ಮದ್‌ಷರೀಪ್ ಅಬ್ದುಲ್‌ಅಜೀಜ್ ಮುಲ್ಲಾ ಹಾಗೂ ಸಿರಾಜ್ ಅಬ್ದುಲ್‌ಮುನಾಫ್ ಗೊಳಸಂಗಿ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ. ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ' ಎಂದು ಪೊಲೀಸರು ಹೇಳಿದರು.
'ಪಂಜಾಬ್ ಕಿಂಗ್ಸ್ ಲೆವೆನ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ಮಂಗಳವಾರ ಐಪಿಎಲ್ ಪಂದ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ಆರೋಪಿಗಳು, ಕಾರಡಗಿ ಕ್ರಾಸ್‌ನಲ್ಲಿ ನಿಂತಿದ್ದರು. 6, 10 ಹಾಗೂ 15 ಓವರ್‌ಗಳ ಲೆಕ್ಕದಲ್ಲಿ ₹1 ಸಾವಿರಕ್ಕೆ ಪ್ರತಿಯಾಗಿ ₹1 ಸಾವಿರ ನೀಡುವುದಾಗಿ ಹೇಳಿ ಜನರಿಂದ ಬೆಟ್ಟಿಂಗ್ ಕಟ್ಟಿಸಿಕೊಳ್ಳುತ್ತಿದ್ದರು. ಮೊಬೈಲ್ ಫೋನ್‌ನಲ್ಲಿ ಸ್ಕೋರ್ ನೋಡಿಕೊಂಡು, ಬೆಟ್ಟಿಂಗ್ ನಡೆಸುತ್ತಿದ್ದರು. ಈ ಬಗ್ಗೆ ಮಾಹಿತಿ ಆಧರಿಸಿ, ಇಬ್ಬರನ್ನೂ ವಶಕ್ಕೆ ಪಡೆಯಲಾಗಿದೆ' ಎಂದು ತಿಳಿಸಿದರು.
ಕಂಚಿನೆಗಳೂರಿನಲ್ಲಿ ವಶಕ್ಕೆ: 'ಆಡೂರು ಠಾಣೆ ವ್ಯಾಪ್ತಿಯ ಕಂಚಿನೆಗಳೂರು ಗ್ರಾಮದಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪಿಗಳಾದ ಸರ್ದಾರಖಾನ್ ಅಬ್ದುಲ್‌ಖಾನ್ ನಾಗರೊಳ್ಳಿ ಹಾಗೂ ಮಹ್ಮದ್‌ಹನೀಫ್ ಮೌಲಾಸಾಬ್ ಚೆನ್ನಾಪುರ ಅವರನ್ನು ವಶಕ್ಕೆ ಪಡೆಯಲಾಗಿದೆ' ಎಂದು ಪೊಲೀಸರು ಹೇಳಿದರು.