
ಚಂಗಾವರದಲ್ಲಿ ಗುರು ಗೌರವ – ನಿವೃತ್ತ ಶಿಕ್ಷಕ ಪಿ.ಜಿ. ಮಂಜುನಾಥ್ ರವರಿಗೆ ಗುರುವಂದನಾ ಸಮಾರಂಭ
ಶಿರಾ ತಾಲೂಕು: ತಾಲೂಕಿನ ಗೌಡಗೆರೆ ಹೋಬಳಿಯ ಚಂಗಾವರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ ಮುಖ್ಯ ಶಿಕ್ಷಕ ಪಿ.ಜಿ. ಮಂಜುನಾಥ್ ರವರಿಗೆ ಗುರುವಂದನೆ ಹಾಗೂ ಬೀಳ್ಕೊಡುಗೆ ಸಮಾರಂಭವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ನಾರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಿ.ಕೆ. ಮಂಜುನಾಥ್ ಮಾತನಾಡಿ, “ಜನ್ಮಕೊಡುವ ತಂದೆ ತಾಯಿಯೊಂದಿಗೆ ಜ್ಞಾನ ನೀಡುವ ಗುರುಗಳೂ ನಮ್ಮ ಬದುಕಿನ ದಾರಿದೀಪರು. ಅವರನ್ನು ಆದರ್ಶವಾಗಿ ಮುಂದುವರಿದರೆ ಯಶಸ್ಸು ತಾನಾಗಿಯೇ ಬರಲಿದೆ,” ಎಂದು ಅಭಿಪ್ರಾಯಪಟ್ಟರು.
ಶಿರಾ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವು ಚಂಗಾವರ ಮಾತನಾಡಿ, “ಪದವೀಧರಾದ ಸಾವಿರಾರು ವಿದ್ಯಾರ್ಥಿಗಳಿಗೆ ಜೀವನ ದಾರಿಗೆ ಬೆಳಕು ನೀಡಿದ ಮಂಜುನಾಥ್ ರವರ ಸೇವೆ ಹೀರೋ ಪಾತ್ರದಂತಿತ್ತು,” ಎಂದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಆರ್. ಹರೀಶ್ ಮಾತನಾಡಿ, “ತಾವು ಓದಿದ ಶಾಲೆಗೆ ಏನಾದರೂ ಕೊಡುಗೆ ನೀಡಬೇಕು ಎಂಬ ಸಂಕಲ್ಪದಿಂದ ಹಳೆ ವಿದ್ಯಾರ್ಥಿಗಳು ಮುಂದಾದರೆ ಸರ್ಕಾರಿ ಶಾಲೆಗಳ ಅಭಿವೃದ್ಧಿ ಸಾಧ್ಯ,” ಎಂದು ಹೇಳಿದರು.
ಖ್ಯಾತ ಅಂತರಾಷ್ಟ್ರೀಯ ಜನಪದ ಗಾಯಕ ಗೋ.ನಾ.ಸ್ವಾಮಿ ಅವರು, “ಗುರುಗಳ ಸೇವೆ ಅನನ್ಯ. ಅವರು ಕಲಿಸಿದ ಪಾಠ ಬದುಕಿನ ದಾರಿದೀಪ. ಅವರಿಗೆ ಯಾವತ್ತೂ ನಮನ ಮಾಡಬೇಕು,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೂಡಲಗಿರಿಯಪ್ಪ, ಎಸ್‌ಎಂಸಿ ಅಧ್ಯಕ್ಷ ಜಿ. ಗೋಪಾಲಕೃಷ್ಣ, ವಿವಿಧ ಇಲಾಖೆಯ ಅಧಿಕಾರಿಗಳು, ಹಳೆ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.