
ಸರಕಾರದ ಜಾತಿ ಸಮೀಕ್ಷೆಯಲ್ಲಿ ಹೊಲಯ ಎಂದೇ ನಮೂದಿಸಬೇಕು
ಸಿದ್ದಾರ್ಥ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಸಮುದಾಯಕ್ಕೆ ಜಾಗೃತಿ
ದೇವನಹಳ್ಳಿ: ಆ.೧, ೨೦೨೪ರ ಸುಪ್ರೀಂ ಕೋರ್ಟ್ ಆದೇಶದನ್ವಯ ರಾಜ್ಯ ಸರಕಾರ ಒಳ ಮೀಸಲಾತಿಯನ್ನು ಜಾರಿಗೊಳಿಸಲು ತೀರ್ಮಾನಿಸಿರುವ ಹಿನ್ನಲೆಯಲ್ಲಿ ಸರಕಾರದ ಜಾತಿ ಗಣತಿ ಸಮೀಕ್ಷೆಯಲ್ಲಿ ಸಮುದಾಯದ ಪ್ರತಿಯೊಬ್ಬರು ಕಡ್ಡಾಯವಾಗಿ ಹೊಲಯ ಎಂದೇ ನಮೂದಿಸಬೇಕೆಂದು ಸಿದ್ಧಾರ್ಥ ಚಾರಿಟೆಬಲ್ ಟ್ರಸ್ಟ್ ಗೌರವ ಅಧ್ಯಕ್ಷ ಕೆ.ವಿ.ಸ್ವಾಮಿ ತಿಳಿಸಿದರು.
ದೇವನಹಳ್ಳಿ ತಾಲೂಕಿನ ಕುಂದಾಣ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಯ ಮುಂಭಾಗದಲ್ಲಿ ಸಿದ್ಧಾರ್ಥ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಜಾತಿ ಗಣತಿಯಲ್ಲಿ ಹೊಲಯ ಎಂದು ಕಡ್ಡಾಯವಾಗಿ ನಮೂದಿಸಲು ಹಮ್ಮಿಕೊಂಡಿದ್ದ ಜಾಗೃತಿ ಕಾರ್‍ಯಕ್ರಮದಲ್ಲಿ ಸಮುದಾಯಕ್ಕೆ ಅರಿವು ಮೂಡಿಸಿ ಅವರು ಮಾತನಾಡಿದರು.
ಪರಿಶಿಷ್ಟ ಜಾತಿಯಲ್ಲಿ ಉಪಜಾತಿಯನ್ನು ಗುರುತಿಸಲು ನಿವೃತ್ತ ನ್ಯಾ.ಹೆಚ್.ಎನ್.ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಆಯೋಗವನ್ನು ರಚಿಸಿರುವ ಜಾತಿಯಲ್ಲಿ ಹೊಲಯ, ಆದಿ ಕರ್ನಾಟಕ, ಆದಿ ದ್ರಾವಿಡ, ಮಾಲ, ಛಲವಾದಿ, ಬಲಗೈ, ಮಹರ್, ಬೇಗರ್, ಮೂಲದಾಸರ್, ಹೊಲೆಯದಾಸರ್, ಪರಯ, ಆದಿ ಆಂಧ್ರ ಈ ರೀತಿಯಾಗಿ ಹಳ್ಳಿಗಳಲ್ಲಿ ಕರೆಯಲ್ಪಡುವ ಜಾತಿಗಳ ನಿವಾರಣೆ ಮಾಡಲು ಸಮೀಕ್ಷೆ ನಡೆಸಬಕೆಂದು ಆಯೋಗವು ಮಧ್ಯಂತರ ವರದಿ ನೀಡಿರುವ ಹಿನ್ನಲೆಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಿ, ಜನಸಂಖ್ಯೆಗೆ ಅನುಗುಣವಾಗಿ ಜಾತಿಗಣತಿ ಮಾಡಲು ತೀರ್ಮಾನಿಸಿರುತ್ತಾರೆ. ಹಾಗಾಗಿ, ಊರು, ಗ್ರಾಮ, ಕಾಲೋನಿಗಳಿಗೆ ಸರಕಾರದ ವತಿಯಿಂದ ಸಮೀಕ್ಷೆ ನಡೆಸಲು ಅಧಿಕಾರಿಗಳು ಮನೆಗಳ ಬಳಿ ಬಂದಾಗ ಮೂಲ ಜಾತಿಯಾದ ಹೊಲಯ ಎಂದು ಬರೆಯಬೇಕು ಎಂದು ಮನವಿ ಮಾಡಿದರು.
ಜಾತಿ ಗಣತಿಯಲ್ಲಿ ನಿಖರವಾದ ಮಾಹಿತಿ ನೀಡಿದರೆ, ಮುಂದಿನ ಪೀಳಿಗೆ ಮಕ್ಕಳಿಗೆ ಶಿಕ್ಷಣ, ಉದ್ಯೋಗ, ರಾಜಕೀಯವಾಗಿ ಪ್ರತ್ಯೇಕ ಮೀಸಲಾತಿ ದೊರೆಯುವುದರಿಂದ ಸಮುದಾಯವು ಅಭಿವೃದ್ಧಿ ಹೊಂದಲು ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಪ್ರತಿ ಸಮುದಾಯದ ಪ್ರಜೆ ತಪ್ಪದೇ ಹೊಲಯ ಎಂದು ನಮೂದು ಮಾಡಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಸಿದ್ಧಾರ್ಥ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ತ್ರಿಮೂರ್ತಿ, ಕಾರ್‍ಯದರ್ಶಿ ಶ್ರೀನಿವಾಸ್(ಗಾಂಧಿ), ಉಪಾಧ್ಯಕ್ಷ ಲಿಂಗಧೀರಗೊಲ್ಲಹಳ್ಳಿ ರಘು, ಜಗದೀಶ್, ಯಲವಳ್ಳಿ ಮುನಿಕೃಷ್ಣ, ಕುಂದಾಣ ನರಸಿಂಹಮೂರ್ತಿ, ಭೈರಪ್ಪ, ಛಲವಾದಿ ಮುಖಂಡರು ಇದ್ದರು.
ಚಿತ್ರ: