logo

ಮಂಗಳೂರು ಬಜಪೆ ಸುಹಾಸ್ ಶೆಟ್ಟಿ ಕೊಲೆ ಹಿನ್ನೆಲೆ: ಮಂಗಳೂರು ಸೇರಿ ರಾಜ್ಯದ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಹೈ ಅಲರ್ಟ್

ಬೆಂಗಳೂರು: ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಸಂಬಂಧ ಈಗಾಗಲೇ ಎಂಟು ಮಂದಿ ಆರೋಪಿಗಳನ್ನು ಬಂಧಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು, ಹೆಚ್ಚಿನ ವಿಚಾರಣೆ ನಡೆಸಿದ್ದಾರೆ. ಮತ್ತೊಂದೆಡೆ ಕಾನೂನು ಸುವ್ಯವಸ್ಥೆ ಕಾಪಾಡಲು ರಾಜ್ಯದೆಲ್ಲೆಡೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.


ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಕೇಸ್ ಬೆನ್ನಲ್ಲೇ ರಾಜ್ಯಾದ್ಯಂತ ಅಲರ್ಟ್ ಆಗಿರುವ ಪೊಲೀಸರು, ಆಯಾ ವಿಭಾಗದ ಎಲ್ಲಾ ಐಜಿಪಿಗಳಿಂದ‌ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗಳಿಗೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ. ಹಾಗಾಗಿ ಸೂಕ್ಷ್ಮ ಪ್ರದೇಶಗಳಾದ ಮಂಗಳೂರು, ಉಡುಪಿ, ಶಿವಮೊಗ್ಗ, ಕೋಲಾರ, ಹುಬ್ಬಳ್ಳಿ, ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಕಡೆಗಳಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.

ಪ್ರತಿಭಟನೆಗಳು, ಜಾಥಾಗಳು ಅಥವಾ ಜನಜಂಗುಳಿ ಸೇರಿದ ಸಂದರ್ಭದಲ್ಲಿ ತೀವ್ರ ನಿಗಾವಹಿಸಬೇಕು. ಲಾ ಅಂಡ್ ಆರ್ಡರ್ ಧಕ್ಕೆಯಾಗದಂತೆ ಪರಿಸ್ಥಿತಿ ನೋಡಿಕೊಂಡು ಪ್ರತಿಭಟನೆಗಳಿಗೆ ಅನುಮತಿ ಕೊಡುವ ವಿಚಾರವನ್ನು ಕಡ್ಡಾಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು. ಸೋಷಿಯಲ್ ಮೀಡಿಯಾಗಳ ಬಗ್ಗೆ ಆಯಾ ಜಿಲ್ಲಾ ವ್ಯಾಪ್ತಿಗಳಲ್ಲಿ ವಿಶೇಷ ಸೈಬರ್ ತಂಡ ನಿಗಾವಹಿಸಬೇಕು, ಪ್ರಚೋದನಕಾರಿ ಬರಹ ಹಾಗೂ ಹೇಳಿಕೆ ಕೊಡುವ ರೀತಿಯಲ್ಲಿ ಮಾತನಾಡುವವರ ಬಗ್ಗೆ ಗಮನ ಹರಿಸುವಂತೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಗಳ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಗಸ್ತು ಹೆಚ್ಚಿಸಬೇಕು. ಇನ್ನೂ ಬೆಂಗಳೂರು ನಗರದ ಎಂಟು ವಿಭಾಗದ‌ ಎಲ್ಲಾ ಸೂಕ್ಷ್ಮ ಪ್ರದೇಶದಲ್ಲಿ ಹೆಚ್ಚಿನ ನಿಗಾವಹಿಸುವಂತೆ ಡಿಸಿಪಿಗಳಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

4
900 views