
ಮಹಿಳೆಯರೇ ನಿಮ್ಮ ಪತಿಗೆ ಮಾತ್ರ ಇರಲಿ, ಎಲ್ಲರಿಗೂ ಅಲ್ಲ, ಅರೆಬರೆ ಬಟ್ಟೆ ಹಾಕಬೇಡಿ :ನಟ ಸುಮನ್ ತಲ್ವಾರ್
ಯುವತಿಯರು ಅರೆಬರೆ ಬಟ್ಟೆಗಳನ್ನು ತೊಡುವುದೇ ಅತ್ಯಾಚಾರಕ್ಕೆ ಕಾರಣ ಎಂದು ಕೆಲವರು ಹೇಳುವುದನ್ನು ಕೇಳಿದ್ದೇವೆ. ಪುಟ್ಟ ಮಕ್ಕಳ ಮೇಲೆ ಅತ್ಯಾಚಾರ ಮಾಡುವಾಗ ಯಾವ ಬಟ್ಟೆ ಕಾರಣವಾಯಿತು ಎಂದು ಮರುಪ್ರಶ್ನೆ ಮಾಡುವವರು ಇದ್ದಾರೆ. ಬಹುಭಾಷಾ ನಟ ಸುಮನ್ ಮಹಿಳೆಯರ ತೊಡುವ ಬಟ್ಟೆಯ ಬಗ್ಗೆ ಆಡಿರುವ ಮಾತುಗಳು ಈಗ ವೈರಲ್ ಆಗುತ್ತಿವೆ. ತುಳು ಭಾಷೆ ಮಾತನಾಡುವ ಬಿಲ್ಲವ ಕುಟುಂಬದಲ್ಲಿ ಹುಟ್ಟಿ ಬೆಳೆದವರು ನಟ ಸುಮನ್ ತಲ್ವಾರ್. 70ರ ದಶಕದಲ್ಲೇ ಅವರು ಚಿತ್ರರಂಗವನ್ನು ಪ್ರವೇಶಿಸಿದರು. ತಮಿಳು, ತೆಲುಗು ಕನ್ನಡ, ಮಲಯಾಳಂ ಹಾಗೂ ಹಿಂದಿ ಭಾಷೆಯ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಹೀರೊ ಆಗಿ ಒಂದು ಕಾಲದಲ್ಲಿ ಮಿಂಚಿದ ಸುಮನ್ ಬಳಿಕ ಪೋಷಕ ಪಾತ್ರಗಳತ್ತ ಮುಖ ಮಾಡಿದರು. ರಾಜಕೀಯರಂಗದಲ್ಲೂ ಕೂಡ ಗುರುತಿಸಿಕೊಂಡಿದ್ದಾರೆ
ಸಿನಿಮಾ ಹಾಗೂ ಸಮಾಜದ ಬಗ್ಗೆ ನಟ ಸುಮನ್ ತಲ್ವಾರ್ ತೆಲುಗು ಟಿವಿ5 ಸಂದರ್ಶನದಲ್ಲಿ ಮಾತನಾಡಿದ್ದಾರೆ. ಸಿನಿಮಾ ಒಂದು ಬಹಳ ಪವರ್ಫುಲ್ ಮಾಧ್ಯಮ. ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ಇಲ್ಲವಾದಲ್ಲಿ ಅದರಿಂದ ಆಗುವ ಒಳಿತಿಗಿಂತ ಕೆಡುಕೇ ಹೆಚ್ಚು. ಸದಾಭಿರುಚಿಯ ಸಿನಿಮಾಗಳು ಬರಬೇಕು. ಸಮಾಜದಲ್ಲಿ ಕೂಡ ಸಾಕಷ್ಟು ರೀತಿಯಲ್ಲಿ ಬದಲಾವಣೆ ಆಗಬೇಕು. ನಾವು ನಮ್ಮ ದೇಶದ ಸಂಸ್ಕೃತಿ, ಆಚರಣೆ ಬಿಟ್ಟು ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅನುಸರಿಸಲು ಮುಂದಾಗಿರುವುದು ತಪ್ಪು ಎಂದು ಹೇಳಿದ್ದಾರೆ.
ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ನಟ ಸುಮನ್ ಕಳವಳ ವ್ಯಕ್ತಪಡಿಸಿದ್ದಾರೆ. ಮನೆಯಲ್ಲಿ ಮಕ್ಕಳನ್ನು ಸರಿಯಾದ ರೀತಿಯಲ್ಲಿ ಬೆಳೆಸಬೇಕು. ಇಲ್ಲದೇ ಹೋದಲ್ಲಿ ದುಶ್ಚಟಗಳಿಗೆ ದಾಸರಾಗುವುದು ಮಾತ್ರವಲ್ಲ, ಕೆಟ್ಟ ಹಾದಿಯನ್ನು ತುಳಿಯುತ್ತಾರೆ ಎಂದು ಸುಮನ್ ಆತಂಕ ವ್ಯಕ್ತಪಡಿಸಿದ್ದಾರೆ. ಡಬಲ್ ಮೀನಿಂಗ್ ಡೈಲಾಗ್ ಇಲ್ಲದ, ಅಶ್ಲೀಲತೆ, ಹಸಿಬಿಸಿ ದೃಶ್ಯಗಳಿಲ್ಲದ ಸಿನಿಮಾಗಳನ್ನು ಮಾಡಬೇಕು. ಇವತ್ತು ಮೊಬೈಲ್ನಲ್ಲಿ ಪೋರ್ನ್ ವಿಡಿಯೋ ನೋಡುವಂತಾಗಿದೆ. ಕೊನೆ ಪಕ್ಷ ಸಿನಿಮಾಗಳನ್ನಾದರೂ ಸರಿಯಾಗಿ ಮಾಡಬೇಕು. ಇದರಿಂದಲೇ ಸಮಾಜ ಹಾಳಾಗುತ್ತಿದೆ. ಮಹಿಳೆಯರ ಮೇಲಿನ ದೌರ್ಜನ್ಯ ನಿಲ್ಲಬೇಕು. ಮಹಿಳೆಯರು ಕೂಡ ತಾವು ಧರಿಸುವ ಉಡುಪಿನ ಬಗ್ಗೆ ಗಮನ ಕೊಡಬೇಕು ಎಂದು ನಟ ಸುಮನ್ ಅಭಿಪ್ರಾಯಪಟ್ಟಿದ್ದಾರೆ. “ಮಹಿಳೆಯರಿಗೆ ನಾನು ಒಂದು ಮಾತು ಹೇಳ್ತೀನಿ. ಇದು ಭಾರತ ದೇಶ. ಹಾಗಾಗಿ ನೀವು ಧರಿಸುವ ಉಡುಪಿನ ಬಗ್ಗೆ ಗಮನವಿರಲಿ. ನಿಮ್ಮ ಮನೆಯೊಳಗೆ ಯಾವ ಬಟ್ಟೆಯನ್ನಾದರು ಧರಿಸಿ. ಹೊರಗಡೆ ಬಂದಾಗ ಸೆಕ್ಸಿಯಾಗಿ ಬಟ್ಟೆ ಹಾಕಿಕೊಂಡರೆ ನಿಮ್ಮನ್ನು ಕಾಪಾಡಲು ಯಾವ ಕಾನೂನು ಇರಲ್ಲ. ವಿದೇಶದಲ್ಲಿ ಅದಕ್ಕೆ ಕಾನೂನು ಇದೆ. ಅಲ್ಲಿ ಅದೆಲ್ಲ ನಡೆಯುತ್ತದೆ. ಮಹಿಳೆಯರೇ ನಿಮ್ಮ ದೇಹವನ್ನು ನಿಮ್ಮ ಗಂಡ ಬಿಟ್ಟು ಯಾರು ನೋಡಬೇಕು? ಗಂಡನಿಗೆ ತೋರಿಸ್ತೀರಾ? ಊರಿಗೆಲ್ಲಾ ತೋರಿಸ್ತೀರಾ? ಆಲೋಚಿಸಿ. ನಿಮ್ಮ ವರ್ಜಿನಿಟಿ ನಿಮ್ಮ ಗಂಡನಿಗೆ ಮಾತ್ರ. ಎಲ್ಲರಿಗೂ ಅಲ್ಲ. ಅದನ್ನು ಮನಸ್ಸಿನಲ್ಲಿಟ್ಟುಕೊಂಡು ಬಟ್ಟೆ ಧರಿಸಿ” ಎಂದು ನಟ ಸುಮನ್ ತಲ್ವಾರ್ ಹೇಳಿದ್ದಾರೆ. .
“ದೇವಸ್ಥಾನಕ್ಕೆ ಬರುವಾಗ ನಿಮ್ಮ ಉಡುಪು ಹೇಗಿರಬೇಕು? ಜೀನ್ಸ್, ಟೀ-ಶರ್ಟ್ ಯಾಕೆ? ಚೂಡಿದಾರ್, ಸಾರಿ ಯಾಕೆ ಹಾಕಿಕೊಂಡು ಬರಬಾರದು. ಮದುವೆಗೆ ಹೋದಾಗ, ಹೊರಗಡೆ ಹೋದಾಗ, ಮನೆಯಲ್ಲಿ ಇದ್ದಾಗ, ಪಬ್- ಕ್ಲಬ್ಗೆ ಹೋದಾಗ ನಿಮ್ಮ ವೇಷಭೂಷಣ ಹೇಗಿರಬೇಕು? ಎನ್ನುವುದು ನಿಮ್ಮ ಇಷ್ಟ. ಇದು ಈ ರೀತಿಯೇ ಮುಂದುವರೆದರೆ ಇಂತಹ ಪ್ರಕರಣಗಳು ನಡೆಯುತ್ತದೆ. ಪುರುಷರನ್ನು ನೀವು ಆಕರ್ಷಿಸುವುದರಿಂದ ಅವರು ಹೀಗೆಲ್ಲಾ ಮಾಡ್ತಾರೆ. ಅವರ ವಯಸ್ಸು ಆ ರೀತಿ ಇದೆ. ಸಿನಿಮಾ, ಮೊಬೈಲ್, ಟಿವಿಯಲ್ಲಿ ನೋಡಿ ಹೀಗೆ ಆಡುತ್ತಾರೆ. ಪೋಷಕರಿಗೆ ಒಳ್ಳೆ ಹೆಸರು ತರಬೇಕು. ನಿಮ್ಮಿಂದಲೇ ನಿಮ್ಮ ಪೋಷಕರಿಗೆ ಕೆಟ್ಟ ಹೆಸರು ಬರುತ್ತದೆ. ಇದು ಭಾರತ ದೇಶ, ಇಲ್ಲಿ ಒಂದಷ್ಟು ರೀತಿ ನೀತಿ, ವೇಷಭೂಷಣ ಎನ್ನುವುದು ಇದೆ ಅದನ್ನು ಅನುಕರಣೆ ಮಾಡಿ” ಎಂದು ನಟ ಸುಮನ್ ಹೇಳಿದ್ದಾರೆ.