logo

ಯೋಧನ ಪುತ್ರಿ, ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಸ್ನೇಹಾ ದೇಬನಾತ್ ಶವ ಯಮುನಾ ನದಿಯಲ್ಲಿ ಪತ್ತೆ ಜೂಲೈ 14, 2025

ದೆಹಲಿ: ವಾರದ ಹಿಂದೆ ನಾಪತ್ತೆಯಾಗಿದ್ದ ದೆಹಲಿ ವಿಶ್ವವಿದ್ಯಾಲಯದ 19 ವರ್ಷದ ವಿದ್ಯಾರ್ಥಿನಿ ಸ್ನೇಹ ದೇಬನಾಥ್ ಶವ ದೆಹಲಿ ಫ್ಲೈಒವರ್ ಕೆಳಗೆ ದೆಹಲಿ ನದಿಯಲ್ಲಿ ಪತ್ತೆಯಾಗಿದೆ. ತ್ರಿಪುರ ಮೂಲದ ಸ್ನೇಹ ದೇಬನಾಥ್ ಜುಲೈ 7ರಿಂದ ಕಾಣೆಯಾಗಿದ್ದಳು. ಆಕೆ ನಾಪತ್ತೆಯಾದ ನಂತರ ಆಕೆಯ ಕೋಣೆಯಲ್ಲಿ ಆಕೆಯೇ ಬರೆದಿದ್ದಾಳೆ ಎನ್ನಲಾದ ಪತ್ರವೊಂದು ಸಿಕ್ಕಿತ್ತು.


ಸ್ನೇಹ ದೇಬನಾಥ್ ದಕ್ಷಿಣ ತ್ರಿಪುರ ಜಿಲ್ಲೆಯ ಸಬ್ರೂಮ್ ಮೂಲದವಳಾಗಿದ್ದರಿಂದ ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಸಾಹಾ ಈ ಬಗ್ಗೆ ಆದಷ್ಟು ಬೇಗ ತನಿಖೆ ನಡೆಸಲು ಪೊಲೀಸರಿಗೆ ಸೂಚಿಸಿದ್ದರು. ಜುಲೈ 7 ರಂದು ಸ್ನೇಹ ಕೊನೆಯ ಬಾರಿಗೆ ತನ್ನ ಕುಟುಂಬದವರೊಂದಿಗೆ ಮಾತನಾಡಿದ್ದರು ಈ ವೇಳೆ ಆಕೆ. ತಾನು ಸ್ನೇಹಿತೆ ಪಿಟೂನಿಯ ಜೊತೆ ಸರಾಯ್ ರೋಹಿಲ್ಲ ರೈಲು ನಿಲ್ದಾಣಕ್ಕೆ ಹೋಗುತ್ತಿದ್ದೇನೆ ಎಂದು ತಿಳಿಸಿದ್ದಳು. ಬೆಳಗ್ಗೆ 5:56 ಕ್ಕೆ ಸ್ನೇಹ ಕೊನೆಯ ಬಾರಿಗೆ ಕರೆ ಮಾಡಿದ್ದಳು, ನಂತರ ಬೆಳಗ್ಗೆ 8:45 ರ ಸುಮಾರಿಗೆ ಆಕೆಯ ಫೋನ್ ಸ್ವಿಚ್ ಆಫ್ ಆಗಿತ್ತು ಎಂದು ಕುಟುಂಬ ಹೇಳಿದೆ. ಆದರೆ ಸ್ನೇಹಿತೆ ಪಿಟೂನಿಯ ಆ ದಿನ ಸ್ನೇಹಳನ್ನು ನೋಡಿಲ್ಲ ಎಂದು ಹೇಳಿದ್ದಳು.

ಇತ್ತ ನಾಪತ್ತೆಯಾದ ಸ್ನೇಹಾಳನ್ನು ದೆಹಲಿಯ ಸಿಗ್ನೇಚರ್ ಬ್ರಿಡ್ಜ್ ಬಳಿ ಇಳಿಸಿದ್ದಾಗಿ ಆಕೆಗೆ ಕ್ಯಾಬ್ ಸರ್ವೀಸ್ ನೀಡಿದ್ದ ಚಾಲಕ ದೃಢಪಡಿಸಿದ್ದ. ನಿರಂತರವಾಗಿ ಭದ್ರತಾ ಸಮಸ್ಯೆಗಳಿರುವ ಮತ್ತು ಸಿಸಿಟಿವಿ ವ್ಯಾಪ್ತಿಯಿಲ್ಲದ ಪ್ರದೇಶದಲ್ಲಿ 19 ವರ್ಷದ ಯುವತಿಯನ್ನು ಕ್ಯಾಬ್ ಚಾಲಕ ಇಳಿಸಿದ್ದ. ಹಾಗಾಗಿ ಸಿಗ್ನೇಚರ್ ಬ್ರಿಡ್ಜ್ ನಿಂದ ಸ್ನೇಹ ಎಲ್ಲಿಗೆ ಹೋದಳು ಎಂದು ಪತ್ತೆ ಹಚ್ಚುವುದು ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಜುಲೈ 9 ರಂದು ದೆಹಲಿ ಪೊಲೀಸ್ ಅಪರಾಧ ವಿಭಾಗ, ಎನ್‌ಡಿಆರ್‌ಎಫ್ ಸಹಾಯದಿಂದ ಸಿಗ್ನೇಚರ್ ಬ್ರಿಡ್ಜ್ ಪ್ರದೇಶದಲ್ಲಿ ಮತ್ತು ಏಳು ಕಿಲೋಮೀಟರ್ ಸುತ್ತಳತೆಯಲ್ಲಿ ವ್ಯಾಪಕ ಶೋಧ ನಡೆಸಿದರೂ ಯಾವುದೇ ಆಕೆಯ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಆದರೆ ಈಗ ಆಕೆಯ ಶವ ಯಮುನಾ ನದಿಯಲ್ಲಿ ಪತ್ತೆಯಾಗಿದೆ.


ಸ್ನೇಹ ದೇಬನಾಥ್ ಶವವನ್ನು ನದಿಯಿಂದ ಹೊರತೆಗೆಯಲಾಗಿದೆ ಹಾಗೂ ಆಕೆಯ ಶವವನ್ನು ಆಕೆಯ ಕುಟುಂಬದವರು ಗುರುತಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ. ಪ್ರಾಥಮಿಕವಾಗಿ ಕಂಡು ಬಂದ ಕೆಲವು ಸುಳಿವುಗಳ ಪ್ರಕಾರ ಆಕೆ ನದಿಗೆ ಹಾರಿ ಸಾವಿಗೆ ಶರಣಾಗಿರುವ ಅನುಮಾನವಿದೆ. ಹಾಗಿದ್ದು, ದೆಹಲಿ ಪೊಲೀಸರು ಪೂರ್ಣ ಪ್ರಮಾಣದ ತನಿಖೆ ನಿರ್ಧರಿಸಿದ್ದಾರೆ.

ಸೈನಿಕರೊಬ್ಬರ ಪುತ್ರಿಯಾಗಿದ್ದ ಸ್ನೇಹ ದೇಬನಾಥ್ ದೆಹಲಿಯ ಯುನಿವರ್ಸಿಟಿಗೆ ಸೇರಿದ ಆತ್ಮರಾಮ್ ಸನಾತನ ಧರ್ಮ ಕಾಲೇಜಿನಲ್ಲಿ ಗಣಿತಶಾಸ್ತ್ರದಲ್ಲಿ ಪದವಿ ಓದುತ್ತಿದ್ದಳು. ಆಕೆ ಕಾಣೆಯಾದಾಗಿನಿಂದಲೂ ಆಕೆಯ ತಂದೆ ಪ್ರೀತೀಶ್ ದೇಬನಾಥ್ ದೆಹಲಿ ಪೊಲೀಸರಿಗೆ ಮಗಳನ್ನು ಹುಡುಕಿ ಕೊಡುವಂತೆ ನಿರಂತರವಾಗಿ ಒತ್ತಡ ಹೇರಿದ್ದರು. 4 ಸದಸ್ಯರಿದ್ದ ಇವರ ಕುಟುಂಬ ಹಲವು ವರ್ಷಗಳಿಂದ ದೆಹಲಿಯಲ್ಲಿ ವಾಸವಿತ್ತು. ಆದರೆ ಮಗಳ ಸಾವಿನಿಂದ ಅವರ ಕುಟುಂಬ ಈಗ ತೀವ್ರ ದುಃಖಿತವಾಗಿದೆ.


ಸಂಬಂಧಿಕರ ಪ್ರಕಾರ, ಸ್ನೇಹಾ ಯಾವುದೇ ವಸ್ತುಗಳನ್ನು ತೆಗೆದುಕೊಳ್ಳದೆ ಮನೆಯಿಂದ ಹೊರಟು ಹೋಗಿದ್ದರು ಮತ್ತು ಇತ್ತೀಚಿನ ತಿಂಗಳುಗಳಲ್ಲಿ ಎಟಿಎಂನಿಂದಲೂ ಆಕೆ ಯಾವುದೇ ಹಣವನ್ನು ಡ್ರಾ ಮಾಡಿರಲಿಲ್ಲ. ಆದರೆ ಆಕೆಯ ಹಠಾತ್ ಸಾವು ಕುಟುಂಬದವನ್ನು ಶೋಕದ ಕಡಲಲ್ಲಿ ತೇಲಿಸಿದೆ.

6
365 views