
ಮಾಧ್ವಾರದಲ್ಲಿ ಹೆಚ್ ಡಿಎಫ್ ಸಿ ಬ್ಯಾಂಕ್ ನೂತನ ಶಾಖೆ ಉದ್ಘಾಟಿಸಿದ ಶಾಸಕ ಕಂದಕೂರ
ಗುರುಮಠಕಲ್ : ಮತಕ್ಷೇತ್ರದ ಮಾಧ್ವಾರದಂತಹ ಗ್ರಾಮೀಣ ಭಾಗದಲ್ಲಿ ಹೆಚ್ ಡಿಎಫ್ ಸಿ ಬ್ಯಾಂಕ್ ತನ್ನ ಶಾಖೆಯನ್ನು ಆರಂಭಿಸಿದ್ದು, ಸ್ವಾಗತಾರ್ಹ ಈ ಭಾಗದ ಜನರು ಬ್ಯಾಂಕ್ ನ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಶಾಸಕ ಶರಣಗೌಡ ಕಂದಕೂರ ಅವರು ತಿಳಿಸಿದರು.
ಸಮೀಪದ ಮಾಧ್ವಾರ ಗ್ರಾಮದಲ್ಲಿ ಹೆಚ್ ಡಿಎಫ್ ಸಿ ಬ್ಯಾಂಕ್ ನೂತನವಾಗಿ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.
ಗುರುಮಠಕಲ್ ತಾಲೂಕು ಕೇಂದ್ರದಲ್ಲೇ ಹೆಚ್ ಡಿಎಫ್ ಸಿ ಬ್ಯಾಂಕ್ ಬ್ಯಾಂಕ್ ಶಾಖೆ ಇಲ್ಲ ಅದರಲ್ಲಿ ಮಾಧವಾರ ಗ್ರಾಮದಲ್ಲಿ ಸ್ಥಾಪನೆ ಮಾಡಿದ್ದು ಸಂತಸದ ಸುದ್ದಿ. ಬ್ಯಾಂಕ್ ನ ಸ್ಥಾಪನೆಗೆ ಕಾರಣೀಭೂತರಾದ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ನಮ್ಮ ಭಾಗದ ಜನರು ಮುಗ್ಧರು, ಅದರಲ್ಲಿ ಅನಕ್ಷರಸ್ಥರು ಇದ್ದಾರೆ ಅವರಿಗೆ ಬ್ಯಾಂಕ್ ನ ವ್ಯವಹಾರಗಳ ಬಗ್ಗೆ ಮಾಹಿತಿ ಕಡಿಮೆ. ಬ್ಯಾಂಕ್ ಸಿಬ್ಬಂದಿಯವರು ತಮ್ಮ ಯೋಜನೆಗಳ ಬಗ್ಗೆ ಜನರಿಗೆ ವಿವರವಾಗಿ ಮಾಹಿತಿ ನೀಡುವ ಮೂಲಕ ಅವರನ್ನು ತಮ್ಮ ಗ್ರಾಹಕರನ್ನಾಗಿ ಮಾಡಿಕೊಳ್ಳಬೇಕು ಇದರಿಂದ ಇಬ್ಬರಿಗೂ ಲಾಭವಾಗುತ್ತದೆ. ಬ್ಯಾಂಕ್ ನ ಸಿಬ್ಬಂದಿ ಗ್ರಾಮೀಣ ಜನರೊಂದಿಗೆ ಉತ್ತಮ ಒಡನಾಟವನ್ನು ಇಟ್ಟುಕೊಂಡು ಜನರಿಗೆ ಸಹಕಾರ ಕೊಡಿ ಎಂದು ಸೂಚಿಸಿದರು. ಎಚ್ ಡಿ ಎಫ್ ಸಿ ಬ್ಯಾಂಕ್ ನ ಅಧಿಕಾರಿಗಳು ಪ್ರತಿ ತಾಲೂಕು ಕೇಂದ್ರಗಳಲ್ಲಿ ತಮ್ಮ ಬ್ಯಾಂಕ್ ಶಾಖೆ ಪ್ರಾರಂಭಿಸುವಂತೆ ಕ್ಲಸ್ಟರ್ ಮುಖ್ಯಸ್ಥರಾದ ರವಿ ಸುರಪುರ ಅವರಿಗೆ ಹೇಳಿದರು.
ಇದಕ್ಕೂ ಮುನ್ನ ಯಾದಗಿರಿ ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಭೀಮರಾವ್ ಪಂಚಾಳ ಅವರು ಮಾತನಾಡಿ ಮಾಧವಾರ ಗ್ರಾಮದಲ್ಲಿ ಶಾಖೆ ಸ್ಥಾಪನೆ ಮಾಡುವ ಬಗ್ಗೆ ಆರ್ಥಿಕ ವಿಭಾಗದಿಂದಲೇ ಸೂಚನೆ ಬಂದಿತ್ತು. ಹೀಗಾಗಿ ಹೆಚ್ ಡಿಎಫ್ ಸಿ ಅವರು ಕೇವಲ ಒಂದು ತಿಂಗಳ ಕಾಲಾವಧಿಯಲ್ಲೇ ಶಾಖೆ ಸ್ಥಾಪನೆ ಮಾಡಿದ್ದಾರೆ. ಈ ಭಾಗದ ಪ್ರತಿಯೊಬ್ಬರೂ ಖಾತೆ ತೆಗೆದು ಬ್ಯಾಂಕ್ ನ ಲಾಭ ಪಡೆಕೊಳ್ಳುವಂತೆ ಸಲಹೆ ನೀಡಿದರು.
ಹೆಚ್ ಡಿಎಫ್ ಸಿ ಬ್ಯಾಂಕ್ ನ ಕ್ಲಸ್ಟರ್ ಹೆಡ್ ರವಿ ಸುರಪುರ ಅವರು ಮಾತನಾಡಿ ನಮ್ಮ ಬ್ಯಾಂಕ್ ಭಾರತ ಮಾತ್ರವಲ್ಲ ಪ್ರಪಂಚದಾದ್ಯಂತ ಕಾರ್ಯನಿರ್ವಹಿಸುತ್ತಿದ್ದು ಅಂತರ ರಾಷ್ಟ್ರೀಯ ಬ್ಯಾಂಕ್ ಆಗಿದೆ. ಇತರ ಸೇವೆಗಳಿಗಿಂತ ಗುಣಮಟ್ಟದ ಸೇವೆಯನ್ನು ನೀಡುತ್ತಿದ್ದೇವೆ. ರಾಷ್ಟ್ರ, ರಾಜಧಾನಿ, ಜಿಲ್ಲಾ, ತಾಲೂಕು ಮಾತ್ರವಲ್ಲದೆ ಗ್ರಾಮೀಣ ಭಾಗದಲ್ಲೂ ಶಾಖೆಯನ್ನು ಪ್ರಾರಂಭಿಸಿ ಜನರಿಗೆ ಸೇವೆ ನೀಡುತ್ತಿದ್ದೇವೆ. ಇಲ್ಲಿ ಮನೆ, ಆಸ್ತಿ, ಬೆಳೆ, ವ್ಯಾಪಾರ, ಸೇರಿದಂತೆ ಇತ್ಯಾದಿ ಸೇವೆಗಳನ್ನು ಗ್ರಾಹಕರು ಪಡೆಕೊಳ್ಳಬಹುದು. ಯಾದಗಿರಿ ಜಿಲ್ಲೆಯಲ್ಲಿ ನಮ್ಮ ಬ್ಯಾಂಕ್ ವ್ಯವಹಾರ ಉತ್ತಮವಾಗಿದೆ ಎಂದು ಹೇಳಿದರು.
ಈ ವೇಳೆ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸುಭಾಷ್ ಕಟಕಟಿ, ಗ್ರಾಪಂ ಅಧ್ಯಕ್ಷ ಶಂಕ್ರಪ್ಪ, ಪಿಡಿಓ ಗಿರಿಮಲ್ಲಣ್ಣ, ವಲಯ ಮುಖ್ಯಸ್ಥರಾದ ರಾಮನಾರಾಯಣ, ಪ್ರಾದೇಶಿಕ ಮುಖ್ಯಸ್ಥರದ ಜಾರ್ಜ ಡಾ.ಕೋಸ್ಟಾ, ಶಾಖಾ ಮುಖ್ಯಸ್ಥರಾದ ಸಂತೋಷ ಕುಮಾರ ಸೇರಿದಂತೆ ಮುಂತಾದವರಿದ್ದರು.