
ಕವನ: ಸ್ವಾತಂತ್ರ್ಯದ ತಡಕಾಟದಲ್ಲಿ..
~ ಸಿಂಸಾರುಲ್ ಹಕ್ ಆರ್ಲಪದವು
ಬಂದಿದೆ ಆಗಸ್ಟ್ ಹದಿನೈದು
ಬಾನೆತ್ತರ ಹಾರಲು ರಾಷ್ಟ್ರಧ್ವಜ
ವೀರಯೋಧರ ತ್ಯಾಗ ಬಲಿದಾನದ ಸ್ಮರಣೆ
ಮನೆಮನಗಳ ತುಂಬಿದೆ ಸಂಭ್ರಮದ ಹೊನಲು
ಆದರೆ ಮನವನು ಕಾಡುತಿದೆ
ಪಡೆದೆವೇ ನಾವು ನಿಜ ಸ್ವಾತಂತ್ರ್ಯವನು
ಬ್ರಿಟಿಷರೇನೋ ತೊಲಗಿಹರು
ಆದರೂ ಅಳುತಿಹುದೇ ಆ ನೆರಳು
ಭ್ರಷ್ಟಾಚಾರದ ಮಹಾಮಾರಿಯದು
ಹುರಿದು ಮುಕ್ಕುತಿದೆ ದೇಶವನು
ಸ್ವಾರ್ಥ ರಾಜಕಾರಣ ನೀತಿಯದು
ಮುಚ್ಚಿದೆ ಬಡವನ ಬೆವರನು
ಶ್ರೀಮಂತನ ತಿಜೋರಿಯಲಿ
ದೇಶದ ರೈತನ ಕಣ್ಣೀರದು ಮಾತ್ರ
ಈ ನೆಲದ ಮಣ್ಣನು ತೋಯಿಸಲು
ನ್ಯಾಯ ಕೇಳುವ ಬಾಯನು ಮುಚ್ಚಲು
ಪ್ರಶ್ನಿಸೊ ದನಿಗಳನು ಹತ್ತಿಕ್ಕುತಲಿ
ಸತ್ಯವ ನುಡಿಯಲು ದೇಶದ್ರೋಹದ ಪಟ್ಟವು
ಇದೆಂತಹ ಸ್ವಾತಂತ್ರ್ಯವೋ ಎನ್ನುತಲಿ
ಕೊರಗಿ ಮರುಗುತಿದೆ ಆತ್ಮ
ಜಾತಿ, ಮತಗಳ ಹೆಸರಿನಲಿ
ಎಲ್ಲೆಡೆ ನಡೆಯುತಿದೆ ಕದನ
ಮರೆತುಹೋಗಿದೆ
'ಭಾರತೀಯರು' ಎಂಬುವ ಭಾವನೆ
ಕೋಮುವಾದದ ವಿಷಗಾಳಿಯದು
ಸ್ನೇಹ ಸೌಧವನು ಮುರಿಯುತಿದೆ
ಸೌಹಾರ್ದತೆ ಪದವದು ಮಾತ್ರ
ಅರ್ಥವೆ ಇಲ್ಲದೆ ತೊಡರುತಿದೆ
ಹೆಣ್ಣುಮಕ್ಕಳ ಮಾನವು ಎಲ್ಲೆಡೆ
ರಕ್ಷಣೆ ಇಲ್ಲದೆ ನರಳುತಿದೆ
ದೌರ್ಜನ್ಯದ ಕೂಗದು ಗಾಳಿಯಲೇ
ಅರಿವಿಗೆ ಬರದೇ ಲೀನವಾಗುತಿದೆ
ನಿರುದ್ಯೋಗದ ಬೇಗೆಯ ಉರಿಯಲ್ಲಿ
ಯುವಕರ ಕನಸದು ಕರಗುತಿದೆ
ಅಸಮಾನತೆಯ ಕಂದಕ ಹಿಗ್ಗುತಿದೆ
ಬನ್ನಿರಿ ಗೆಳೆಯರೆ ಬನ್ನಿರಿ ಎಲ್ಲರೂ
ಸ್ವಾತಂತ್ರ್ಯದ ಪ್ರತಿಜ್ಞೆಯ ಮಾಡೋಣ
ಸಾಮಾಜಿಕ ಪಿಡುಗನು ತೊಡೆಯೋಣ
ಭೇದಭಾವವ ಮರೆಯೋಣ
ಎಲ್ಲರೂ ಒಂದಾಗಿ ನಡೆಯೋಣ
ಕನಸಿನ ಭಾರತ ಕಟ್ಟೋಣ
ಆಗಲೆ ಸಿಗುವುದು ನಿಜ ಸ್ವಾತಂತ್ರ್ಯ
ಅಂದೇ ಸಾರ್ಥಕ ಈ ಮಂತ್ರ
✍🏻 ಸಿಂಸಾರುಲ್ ಹಕ್ ಆರ್ಲಪದವು