logo

ದಂಡಗುಂಡ ಬಸವೇಶ್ವರ ಟ್ರಸ್ಟ್ ‌ಟ್ರಸ್ಟ್ ನಕಲಿ ಅಲ್ಲ ಆಂದೋಲಾ ಸ್ವಾಮಿನೇ ನಕಲಿ ಸ್ವಾಮಿ.

ಚಿತ್ತಾಪುರ: ತಾಲೂಕಿನ ದಂಡಗುಂಡ ಶ್ರೀ ಬಸವೇಶ್ವರ ದೇವಸ್ಥಾನ ಟ್ರಸ್ಟ್ 1984 ರಲ್ಲಿ ನೋಂದಣಿಯಾಗಿದ್ದು ಅಧಿಕೃತ ಟ್ರಸ್ಟ್ ಆಗಿದೆ. ಇದಕ್ಕೆ ಅನಧಿಕೃತ ನಕಲಿ ಟ್ರಸ್ಟ್ ಎಂದು ಹೇಳುವ ಆಂದೋಲಾ ಶ್ರೀ ಸಿದ್ದಲಿಂಗ ಸ್ವಾಮಿನೇ ನಕಲಿ ಸ್ವಾಮಿ ಆಗಿದ್ದಾನೆ ಎಂದು ಬಸವೇಶ್ವರ ದೇವಸ್ಥಾನ ಟ್ರಸ್ಟ್ ಕಾರ್ಯದರ್ಶಿ ಚಂದ್ರಶೇಖರ ಅವಂಟಿ ತಿರುಗೇಟು ನೀಡಿದರು.

ತಾಲೂಕಿನ ದಂಡಗುಂಡ ಶ್ರೀ ಬಸವೇಶ್ವರ ದೇವಸ್ಥಾನದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಂದೋಲಾ ಶ್ರೀ ಸಿದ್ದಲಿಂಗ ಸ್ವಾಮೀಜಿ ತನ್ನ ಜೀವನ ನಡೆಸುವುದಕ್ಕೆ ಸ್ವಯಂ ಘೋಷಿತ ಶ್ರೀರಾಮ್ ಸೇನೆಯ ರಾಜ್ಯಾಧ್ಯಕ್ಷರಾಗಿದ್ದಾರೆ. ಪ್ರಚಾರ ಪಡೆಯುವ ಸಲುವಾಗಿ ಸುದ್ದಿಗೋಷ್ಠಿ ನಡೆಸಿ ಇಲ್ಲಸಲ್ಲದ ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಾನೆ ಎಂದರು.

ದೇವಸ್ಥಾನದ ಟ್ರಸ್ಟ್ ನಕಲಿ ಆದರೆ ಎಂಪಿ, ಎಂಎಲ್‌ಎ ಅನುದಾನ ಹೇಗೆ ಬಂದಿದೆ ಎಂದು ಪ್ರಶ್ನಿಸಿದ ಅವರು, ಎಲ್ಲಾ ದಾಖಲೆಗಳು ಸರಿಯಿದ್ದಾಗ ಮಾತ್ರ ಜಿಲ್ಲಾಧಿಕಾರಿ ಹಣ ಬಿಡುಗಡೆ ಮಾಡುತ್ತಾರೆ ಇದು ಅರಿತುಕೊಂಡು ವಿಚಾರ ಮಾಡಿ ಆರೋಪ ಮಾಡಲಿ.
ದಂಡಗುಂಡದಲ್ಲಿ ಶಿಕ್ಷಣ ಹಾಗೂ ಸಂಸ್ಕಾರ ಪಡೆದ ಜನರಿದ್ದಾರೆ ಇಂತಹ ಜನರನ್ನು ಅಜ್ಞಾನಿಗಳು ಎಂದು ಹೇಳುವ ಆಂದೋಲಾ ಸ್ವಾಮಿನೇ ಅಜ್ಞಾನಿಯಾಗಿದ್ದಾನೆ. ಟ್ರಸ್ಟ್ ಬಗ್ಗೆ ಕಾನೂನು ಬಾಹಿರವಾಗಿ ಹೇಳಿಕೆ ನೀಡಿದರೆ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಸಿದರು.

ಸಂಗನಬಸವ ಶಿವಾಚಾರ್ಯರಿಗೆ ಊರಿನಿಂದ ಹಾಗೂ ಟ್ರಸ್ಟ್‌ ಅವರಿಂದ ಯಾವುದೇ ಅನ್ಯಾಯ ಆಗಿಲ್ಲ, ಅವರೇ ದೂರ ಆಗಿದ್ದಾರೆ. ಕಳೆದ ವರ್ಷ ಜಾತ್ರೆಗೆ ನಾವು ಕರೆದಾಗ ಬರಲಿಲ್ಲ ಅಂದಾಗ ಬಿಟ್ಟುಬಿಡೋಣ ಎಂದು ಊರಿನವರು ನಿರ್ಣಯ ಕೈಗೊಂಡರು. ಆದರೆ ಈ ಬಾರಿ ಪೊಲೀಸ್‌ ರಕ್ಷಣೆಯಲ್ಲಿ ಜಾತ್ರೆಗೆ ಬಂದಿದ್ದಾರೆ. ಈಗಲೂ ಸಮಸ್ಯೆ ಬಗೆಹರಿಸುವ ಕೆಲಸ ಮಾಡುವುದನ್ನು ಬಿಟ್ಟು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಇದು ಸರಿಯಲ್ಲ ಎಂದರು.

ಟ್ರಸ್ಟ್ ಹಿರಿಯ ಸದಸ್ಯ ಭೀಮಣ್ಣ ಸಾಲಿ ಮಾತನಾಡಿ, ದಂಡಗುಂಡ ಬಸವಣ್ಣ ದೇವಸ್ಥಾನ ಹತ್ತಿರ ಸಂಗಮೇಶ್ವರ ಮಠನೇ ಇಲ್ಲ, ಈ ಕುರಿತು ಪಂಚಾಯಿತಿಯಲ್ಲಿ ಯಾವುದೇ ದಾಖಲೆಗಳಿಲ್ಲ. ಇಲ್ಲಿ ಯಾರದೂ ಆಸ್ತಿಯಿಲ್ಲ ಬಸವಣ್ಣಪ್ಪನ ಆಸ್ತಿಯಿದೆ ಸಂಗಮೇಶ್ವರ ಮಠದ ಆಸ್ತಿ ಶೂನ್ಯ ಇದೆ ಎಂದು ಹೇಳಿದರು.

ಆಂದೋಲಾ ಸ್ವಾಮಿ ಖಾವಿ ಬಟ್ಟೆ ಬಿಚ್ಚಿಟ್ಟು ರಾಜಕೀಯ ಮಾಡಲಿ ಎಂದು ಸವಾಲು ಹಾಕಿದರು. ಬಸವಣ್ಣಪ್ಪನ ಆಶೀರ್ವಾದ ಇದ್ದರೆ ಗಡಿಪಾರು ಮಾಡಲಾಗುವುದು. ಟ್ರಸ್ಟ್ ಬಗ್ಗೆ ಬಹಿರಂಗವಾಗಿ ಚರ್ಚೆಗೆ ಬಂದರೆ ಹೇಳಲು ಸಿದ್ದ ಎಲ್ಲೋ ಕುಳಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರೆ ಸುಮ್ಮನಿರಲ್ಲ ಎಂದು ಖಡಕ್ ಆಗಿ ಎಚ್ಚರಿಸಿದರು.

ಟ್ರಸ್ಟ್ ಅನಧಿಕೃತ ಇದಕ್ಕೆ ಆಡಳಿತಾಧಿಕಾರಿ ನೇಮಕ ಮಾಡಬೇಕು ಎಂದು ಆಂದೋಲಾ ಸ್ವಾಮಿ ನಾಳೆ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿರುವುದು ಖಂಡನೀಯ ಎಂದರು.

ಸುದ್ದಿಗೋಷ್ಠಿಯಲ್ಲಿ ಬಸವೇಶ್ವರ ದೇವಸ್ಥಾನ ಟ್ರಸ್ಟ್‌ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ, ಸದಸ್ಯರಾದ ರಾಜಶೇಖ‌ರ್ ಪಾಟೀಲ್ ಸಂಕನೂರ, ಮಹಾಂತಗೌಡ ಪಾಟೀಲ,ದೇವಸ್ಥಾನದ ಅರ್ಚಕ ಗುರು ಪೂಜಾರಿ ಗ್ರಾಮದ ಮುಖಂಡರಾದ ಗಂಗಣ್ಣ ಆಡಕಾಯಿ, ಮಲ್ಲು ಹಳಬೋ, ಹಣಮಂತ ದೊಡ್ಡಮನಿ, ಬನ್ನಪ್ಪ ದೊಡ್ಡಮನಿ, ಈಸಪ್ಪ ಭೂತಪೂರ, ಭೀಮಣ್ಣ ಈರನಿಂಗಣ್ಣ, ಮೌನೇಶ್ ಹೊಸಮನಿ, ಸಣ್ಣ ಬಸಪ್ಪ ದೊಡ್ಡಮನಿ, ಶೇಖಪ್ಪ ಈರಬೋ, ಸಣ್ಣ ಬಸಪ್ಪ ಬಗ್ಗೆ, ಶರಣಪ್ಪ ನಂದಬೋ, ದುರ್ಗಪ್ಪ ದ್ಯವಣಿ, ಭೀಮಣ್ಣ ಮರೇನ್ನರ್, ಚೆನ್ನಯ್ಯ ಸ್ವಾಮಿ ಮಠಪತಿ, ಗುರಣ್ಣಗೌಡ ದಳಪತಿ, ಬಸಲಿಂಗಪ್ಪಗೌಡ ಪಾಟೀಲ, ಭೀಮಣ್ಣ ಹಳಬೋ ಸೇರಿದಂತೆ ಇತರರು ಇದ್ದರು.

2
231 views