logo

ಜಿಲ್ಲಾ ಉಸ್ತುವಾರಿ ಮಂತ್ರಿಗಳಿಂದ ಮೃತ ಬಾಬು ಕುಟುಂಬಕ್ಕೆ ಸಾಂತ್ವನ ಸರ್ಕಾರಿ ಉದ್ಯೋಗ ನೀಡುವುದಾಗಿ ಭರವಸೆ.

ಜಿಪಂ ಸಿಇಒ ಕಾರು ಚಾಲಕ ಬಾಬು ಇದೇ ತಿಂಗಳ 7ನೇ ತಾರೀಕಿನಂದು ಜಿಪಂ ಕಚೇರಿ ಆವರಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಸ್ವಗ್ರಾಮವಾದ ಇಡಗೂರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಹಾಗೂ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಭೇಟಿ ನೀಡಿ ಅವರ ಕುಟುಂಬದವರಿಗೆ ಸಾಂತ್ವನ ಹೇಳಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಜಿಪಂ ಸಿಇಒ ಕಾರು ಚಾಲಕನಾಗಿ ಗುತ್ತಿಗೆ ಆಧಾರ ದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಾಬು ಚಾಲಕ ಹುದ್ದೆ ಕಾಯಂ ಮಾಡಿಕೊಡಲು ಕೆಲವರಿಗೆ ಹಣ ನೀಡಿರುವುದಾಗಿ ಡೆತ್‌ ನೋಟ್‌ ನಲ್ಲಿ ಸ್ಪಷ್ಟವಾಗಿ ಬರೆದಿದ್ದಾನೆ.

ಆದರೆ ನಾನು ಇಲ್ಲಿ ಯಾರ ಹೆಸರನ್ನು ಉಲ್ಲೇಖಿಸಿ ಹೇಳುವುದಿಲ್ಲ. ಮೃತ ವ್ಯಕ್ತಿ ಬರೆದಿರುವ ಡೆತ್ ನೋಟ್ ಪ್ರಕಾರ ಎಫ್‌ಐಆರ್ ಆಗಿದೆ. ಕಾನೂನು ರೀತ್ಯ ಕ್ರಮ ತೆಗೆದುಕೊಳ್ಳುತ್ತಾರೆ.

ಈ ವಿಚಾರವಾಗಿ ನಾವು ಹಸ್ತಕ್ಷೇಪ ಮಾಡಲ್ಲ, ನಮ್ಮ ಉದ್ದೇಶ ಮೃತನ ಕುಟುಂಬಕ್ಕೆ ನ್ಯಾಯ ಸಿಗಬೇಕು ಅಷ್ಟೇ ಇದರಲ್ಲಿ ಯಾವುದೇ ರಾಜಕೀಯ ಬೇಡ.

ಪತ್ನಿಗೆ ಉದ್ಯೋಗ: ಮೃತ ಬಾಬು ಪತ್ನಿಗೆ ಸರಕಾರದಲ್ಲಿ ಚರ್ಚಿಸಿ ಸೂಕ್ತ ಉದ್ಯೋಗ ಅವಕಾಶ ಕಲ್ಪಿಸಿಕೊಡಲಾಗುವುದು ಈಗಾಗಲೇ ಈ ಬಗ್ಗೆ ಜಿಲ್ಲಾಧಿಕಾರಿಗೆ ಹಾಗೂ ಜಿಪಂ ಸಿಇಒಗೆ ಸೂಚಿಸ ಲಾಗಿದ್ದು, ಮೃತನ ಪತ್ನಿಗೆ ಉದ್ಯೋಗದ ಜತೆಗೆ ಸರಕಾರದಿಂದ ಬರುವ ಪರಿಹಾರವನ್ನು ಸಹ ಶೀಘ್ರದಲ್ಲೇ ವಿತರಿಸಲಾಗುವುದು.
ಕೆಲವರು ಸಾವಿನಲ್ಲೂ ರಾಜಕೀಯ ಮಾಡುತ್ತಿರುವುದು ಸರಿಯಲ್ಲ.

ಮೃತನ ಕುಟುಂಬಕ್ಕೆ ಸಾಂತ್ವನ ಹೇಳುವ ಕೆಲಸವಾಗಬೇಕು. ಅದನ್ನು ಬಿಟ್ಟು ಇಲ್ಲಸಲ್ಲದ ಹೇಳಿಕೆಗಳನ್ನು ನೀಡುವ ಮೂಲಕ ತನಿಖೆಯ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ತಪ್ಪಿತಸ್ಥರ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು.ಸಾವಿನಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ ಎಂದರು.

ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಮಾತನಾಡಿ, ಮೃತರ ಕುಟುಂಬಕ್ಕೆ ಯಾವುದೇ ರೀತಿಯ
ಸಹಾಯಕ್ಕೂ ಬದ್ಧನಾಗಿದ್ದು, ಮೃತರ ಪತ್ನಿಗೆ ಉದ್ಯೋಗದ ವ್ಯವಸ್ಥೆ ಮಾಡುವುದಾಗಿ ಸಚಿವರು ತಿಳಿಸಿದ್ದಾರೆ. ಸೂಕ್ತ ತನಿಖೆಯಿಂದ ಯಾರೇ ತಪ್ಪು ಮಾಡಿರಲಿ ಅವರಿಗೆ ಶಿಕ್ಷೆಯಾಗಲಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, ಜಿಪಂ ಸಿಇಒ ಡಾ. ವೈ. ನವೀನ್ ಭಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸಿ ತಹಸೀಲ್ದಾರ್ ಅರವಿಂದ್, ತಾಪಂ ಇಒ ಜಿ.ಕೆ. ಹೊನ್ನಯ್ಯ, ಡಿವೈಎಸ್ಪಿ ಶಿವಕುಮಾರ್, ಸಿಪಿಐ ಕೆ.ಪಿ.ಸತ್ಯನಾರಾಯಣ್, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ. ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯ್‌ಕುಮಾರ್, ಮುಖಂಡರಾದ ಎಚ್.ಎನ್. ಪ್ರಕಾಶ್ ರೆಡ್ಡಿ, ಶ್ರೀನಿವಾಸಗೌಡ, ಗ್ರಾಪಂ ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರು.

50
3052 views