ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ -ಉಪಾಧ್ಯಕ್ಷ ಚುನಾವಣೆಯಲ್ಲಿ ಲಿಂಗಾಯತ ನಾಯಕರಿಗೆ ಪಟ್ಟ ಕಟ್ಟಿದ ಬಾಲಚಂದ್ರ ಜಾರಕಿಹೊಳಿ!
BDCC Bank: ಪ್ರತಿಷ್ಠಿತ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಜಾರಕಿಹೊಳಿ ಬ್ರದರ್ಸ್ಗೆ ಬಹುಮತ ಸಿಕ್ಕಿದೆ. ಸತೀಸ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಹಾಗೂ ರಮೇಶ್ ಜಾರಕಿಹೊಳಿ ಸೇರಿಕೊಂಡು ಎದುರಾಳಿ ರಮೇಶ್ ಕತ್ತಿ ಬಣವನ್ನು ಸೋಲಿಸಿದೆ. ಆದಾಗ್ಯೂ ಇದೀಗ ಅಧ್ಯಕ್ಷ ಪಟ್ಟವನ್ನು ಬಿಜೆಪಿ ನಾಯಕನಿಗೆ ಕಟ್ಟಲಾಗಿದೆ. ವಿಶೇಷ ಅಂದ್ರೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ. ಅಲ್ಲದೇ ಜಾರಕಿಹೊಳಿ ಬ್ರದರ್ಸ್ ನುಡಿದಂತೆ ನಡೆದುಕೊಂಡಿದ್ದಾರೆ.ಇನ್ನೂ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಗೆ ಮುಂಚೆ ನಿರ್ದೇಶಕರ ಸಭೆ ನಡೆದ ಬಳಿಕ ಜೊಲ್ಲೆ ಮತ್ತು ರಾಜು ಕಾಗೆ ನಾಮಪತ್ರ ಸಲ್ಲಿಕೆಗೆ ಹೊರಟರು. ಬಾಲಚಂದ್ರ ಜಾರಕಿಹೊಳಿ ಅವರ ಕಾರಿನಲ್ಲೇ ಈ ಇಬ್ಬರೂ ನಾಮಪತ್ರ ಸಲ್ಲಿಸಲು ತೆರಳಿದ್ದು, ರಾಜ್ಯ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು. ಡಿಸಿಸಿ ಬ್ಯಾಂಕ್ ಬೆಳಗಾವಿ ಜಿಲ್ಲೆಯ ಅತಿದೊಡ್ಡ ಗ್ರಾಮೀಣ ಋಣ ಸಹಕಾರ ಸಂಸ್ಥೆ. ಇದರ ನಿರ್ವಹಣೆಯಲ್ಲಿ ಜಾರಕಿಹೊಳಿ, ಜೊಲ್ಲೆ, ಕತ್ತಿ ಕುಟುಂಬಗಳು ಹಲವು ವರ್ಷಗಳಿಂದ ಪ್ರಭಾವ ಬೀರಿವೆ. ಈ ಬಾರಿಯ ಚುನಾವಣೆಯೂ ರಾಜಕೀಯ ಹೋರಾಟದ ರೂಪ ಪಡೆದಿತ್ತು.ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿ ಮಧ್ಯೆ 30- 30 ತಿಂಗಳು ಅಧಿಕಾರ ಹಂಚಿಕೆ ಸೂತ್ರ ನಡೆದಿದೆ. ಹೌದು… ರಾಜ್ಯ ಮಟ್ಟದಲ್ಲಿ ಕಾಂಗ್ರೆಸ್ ಬಿಜೆಪಿ ವಿರೋದಿಯಾಗಿದ್ದರೂ ಸಹ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆಯಲ್ಲಿ ಮೈತ್ರಿ ಮಾಡಿಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ.