logo

ಗ್ರಂಥಾಲಯಗಳು ಜ್ಞಾನದ ಆಗರಗಳು: ಮಹಾಪೌರರಾದ ಮಂಗೇಶ ಪವಾರ ಅಭಿಮತ…!!

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಗ್ರಂಥಾಲಯದಲ್ಲಿ ಲಭ್ಯವಿರುವ ಸಂಪನ್ಮೂಲಗಳು ಎಂದಿಗೂ ಬತ್ತಿಹೋಗುವುದಿಲ್ಲ. ಓದುಗರು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಇದು ಒಂದು ಅಕ್ಷಯ ಭಂಡಾರವಾಗಿದೆ. ಇವು ಮಾಹಿತಿಯ ಭಂಡಾರ,ಜ್ಞಾನದ ಆಗರಗಳಾಗಿವೆ ಎಂದು ಬೆಳಗಾವಿ ಮಹಾನಗರ ಪಾಲಿಕೆಯ ಪೂಜ್ಯ ಮಹಾಪೌರರಾದ ಮತ್ತು ನಗರ ಕೇಂದ್ರ ಗ್ರಂಥಾಲಯ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಮಂಗೇಶ ಪವಾರ ಅವರು ಹೇಳಿದರು. ಅವರು ನಗರದ ಕೇಂದ್ರ ಗ್ರಂಥಾಲಯದಲ್ಲಿ ನಡೆದ,”ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ” ದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು.ನಗರದಲ್ಲಿಯ ಸಾರ್ವಜನಿಕ ಗ್ರಂಥಾಲಯಗಳ ಉಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಮತ್ತು ಪ್ರೀತಿಯಿಂದ ಇದು “ನಮ್ಮ ಗ್ರಂಥಾಲಯ”ಎಂಬ ಮನೋಭಾವನೆ ಹೊಂದಬೇಕು ಎಂದು ಕರೆನೀಡಿದರು. ನಗರ ಸ್ವಚ್ಛತೆಯ ಬಗ್ಗೆ ಮಾತನಾಡಿ ಸಾರ್ವಜನಿಕರ ಸಹಕಾರಕ್ಕೆ ಮನವಿ ಮಾಡಿದರು.

ಅಧ್ಯಕ್ಷ ಸ್ಥಾನ ವಹಿಸಿದ್ದ ಉಪಮಹಾಪೌರರಾದ ಶ್ರೀಮತಿ ವಾಣಿ ವಿಲಾಸ ಜೋಶಿ ಅವರು ಗ್ರಂಥಾಲಯಗಳ ಉಪಯೋಗ ಮತ್ತು ಬಳಕೆಯ ಕುರಿತು ಮಾತನಾಡಿದರು.ನಗರದ ವಿವಿಧ ಶಾಲಾ ಕಾಲೇಜುಗಳಲ್ಲಿ ಸಪ್ತಾಹ ಅಂಗವಾಗಿ ಸ್ಪರ್ಧೆಗಳನ್ನು ಏರ್ಪಡಿದ್ದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಮಹಾನಗರ ಪಾಲಿಕೆಯ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರಾದ ಶ್ರೀ ರಾಮಯ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ,ಗ್ರಂಥಾಲಯ ಸಪ್ತಾಹ ಆಚರಣೆ ಉದ್ದೇಶ ಮತ್ತು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೇತ್ರಕ್ಕೆ ಡಾ.ರಂಗನಾಥನ ಅವರ ಕೊಡುಗೆ ಬಗ್ಗೆ ತಿಳಿಸಿದರು.
ಸಾಹಿತಿ ಮತ್ತು ನಗರ ಕೇಂದ್ರ ಗ್ರಂಥಾಲಯ ಪ್ರಾಧಿಕಾರದ ಸದಸ್ಯರಾದ ಡಾ.ಎಚ್ ಐ ತಿಮ್ಮಾಪುರ ಅವರು ಓದುವ ಹವ್ಯಾಸವನ್ನು ಹೆಚ್ಚಿಸುವ ಕುರಿತು ಮತ್ತು ಸರ್ಧಾತ್ಮಕ ಪರೀಕ್ಷಾ ತಯಾರಿ ಬಗ್ಗೆ ಕಿವಿಮಾತು ಹೇಳಿದರು. ಅತಿಥಿಗಳಾಗಿ ಮಹಾನಗರ ಪಾಲಿಕೆಯ ಸದಸ್ಯರಾದ ಶ್ರೀಮತಿ ರೇಖಾ ಹೂಗಾರ, ಶ್ರೀ ರಾಜು ಭಾತಖಾಂಡೆ, ನ.ಕೇ.ಗ್ರ.ಪ್ರಾಧಿಕಾರದ ಸದಸ್ಯರಾದ ಶ್ರೀ ಸುರೇಶ ವೈದ್ಯ ಅವರು ಆಗಮಿಸಿದ್ದರು.

ಇದೇ ಸಂಧರ್ಭದಲ್ಲಿ ಉತ್ತಮ ಸೇವೆ ಸಲ್ಲಿಸಿದ ನಗರ ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯದ ಸಿಬ್ಬಂದಿಗಳಿಗೆ “ಉತ್ತಮ ಸಿಬ್ಬಂದಿ ಸೇವಾ ಪ್ರಶಸ್ತಿ” ನೀಡಿ ಗೌರವಿಸಲಾಯಿತು.ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಶಾಲಾ ಕಾಲೇಜುಗಳ ಮಕ್ಕಳನ್ನು ಪ್ರಶಸ್ತಿ ಪ್ರಮಾಣ ಪತ್ರ ನೀಡಿ ಗಣ್ಯರು ಸನ್ಮಾನಿಸಿದರು. ಉತ್ತಮ ಓದುಗರಿಗೂ ಸನ್ಮಾನಿಸಲಾಯಿತು. ಎ ಎ ಕಾಂಬಳೆ ಸ್ವಾಗತಿಸಿದರು. ಏಕನಾಥ ಅಂಬೇಕರ ಮತ್ತು ಪ್ರಕಾಶ ಇಚಲಕರಂಜಿ ಕಾರ್ಯಕ್ರಮ ನಿರ್ವಹಿಸಿದರು. ಸಂಜಯ ಕುಲಕರ್ಣಿ ವಂದಿಸಿದರು. ನಗರ ಜಿಲ್ಲಾ ಕೇಂದ್ರ ಗ್ರಂಥಾಲಯದ ಎಲ್ಲಾ ಸಿಬ್ಬಂದಿ, ಓದುಗರು ಸಾರ್ವಜನಿಕರು ಹಾಜರಿದ್ದರು.******************************

10
184 views