logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ನಿವೇಶನ ಹಂಚಿಕೆಗೆ ಆಮೆಗತಿ ಸಲ್ಲದು ಹೌಸಿಂಗ್ ಬೋರ್ಡ್ ಕಾಮಗಾರಿ ವಿಳಂಬ : ಜಯಕರ್ನಾಟಕ ಹೋರಾಟದ ಎಚ್ಚರಿಕೆ

ಗುರುಮಠಕಲ್ : ಪಟ್ಟಣದಲ್ಲಿ ಕರ್ನಾಟಕ ಗೃಹ ಮಂಡಳಿ ವತಿಯಿಂದ ಸುಮಾರು ಐದರಿಂದ ಆರು ವರ್ಷಗಳ ಹಿಂದೆ ರೈತರಿಂದ 43 ಎಕರೆ 28 ಗುಂಟೆ ಭೂಮಿಯನ್ನು ಹೌಸಿಂಗ್ ಬೋರ್ಡ್ ನಿರ್ಮಾಣ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಂಡಿದ್ದರೂ, ಇಂದಿಗೂ ಸಂಪೂರ್ಣ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳ್ಳದೆ ಇರುವ ವಿಚಾರವಾಗಿ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ಈ ಕುರಿತು ಜಯ ಕರ್ನಾಟಕ ಸಂಘಟನೆ ಗುರುಮಠಕಲ್ ತಾಲೂಕು ಅಧ್ಯಕ್ಷ ನಾಗೇಶ್ ಗದ್ದಿಗಿ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಸರಕಾರ ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿ ಸಮಗ್ರ ಯೋಜನೆಯಡಿ ಟೌನ್ ಪ್ಲಾನ್ ಸಿದ್ಧಪಡಿಸಿ ಮೂಲಭೂತ ಸೌಲಭ್ಯಗಳಾದ ರಸ್ತೆ, ಒಳಚರಂಡಿ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕಾಗಿತ್ತು. ಆದರೆ ಸ್ಥಳೀಯ ರೈತರ ಪಹಣಿಗಳ ವಿಸ್ತೀರ್ಣದ ಆಧಾರದ ಮೇಲೆ ನಿಖರವಾದ ಯೋಜನಾ ರೂಪರೇಖೆ ತಯಾರಿಸದೇ ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನಿಸಿ, ನೂರಾರು ಜನರಿಂದ ನಿವೇಶನ ಹಂಚಿಕೆಗಾಗಿ ಲಕ್ಷಾನುಗಟ್ಟಲ್ಲೇ ಹಣ ವಸೂಲಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಫಲಾನುಭವಿಗಳು ತಮ್ಮ ಕನಸಿನ ಮನೆ ಕಟ್ಟಿಕೊಳ್ಳುವ ನಿರೀಕ್ಷೆಯಲ್ಲಿ ಅರ್ಜಿ ಸಲ್ಲಿಸಿ ಹಣ ಪಾವತಿಸಿ, ಹಲವು ವರ್ಷಗಳು ಕಳೆದರೂ ಸಹ ನಿವೇಶನ ಹಂಚಿಕೆ ಪ್ರಕ್ರಿಯೆ ಪೂರ್ಣಗೊಳ್ಳದೆ ಇರುವುದರಿಂದ ಸಾರ್ವಜನಿಕರಲ್ಲಿ ಬೇಸರ ಹಾಗೂ ಆತಂಕ ಹೆಚ್ಚಾಗಿದೆ. ಕಾಮಗಾರಿ ಪ್ರಗತಿ ನಿಧಾನಗತಿಯಲ್ಲಿ ಸಾಗುತ್ತಿದ್ದು, ಅನೇಕ ಸ್ಥಳಗಳಲ್ಲಿ ಅಭಿವೃದ್ಧಿ ಕಾರ್ಯಗಳು ಅಪೂರ್ಣವಾಗಿರುವುದು ಕಂಡು ಬರುತ್ತಿದೆ. ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಪರಸ್ಪರ ಹೊಣೆ ತಪ್ಪಿಸುವ ಧೋರಣೆ ಅನುಸರಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ ಎಂದರು.
ಸಾರ್ವಜನಿಕರ ಹಣವನ್ನು ಸ್ವೀಕರಿಸಿದ ಬಳಿಕ ಸಮಯಮಿತಿ ಒಳಗಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸುವುದು ಸಂಬಂಧಪಟ್ಟ ಇಲಾಖೆಯ ಜವಾಬ್ದಾರಿಯಾಗಿದ್ದು, ಇಂತಹ ವಿಳಂಬವು ಜನರ ನಂಬಿಕೆಗೆ ಧಕ್ಕೆಯುಂಟುಮಾಡುತ್ತಿದೆ,ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಬಾಕಿ ಇರುವ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ, ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡುವಂತೆ ಅವರು ಆಗ್ರಹಿಸಿದ್ದಾರೆ.
ಯೋಜನೆಯನ್ನು ಉದ್ದೇಶಪೂರ್ವಕವಾಗಿ ವಿಳಂಬಗೊಳಿಸುವ ಯಾವುದೇ ಕ್ರಮವನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿರುವ ಅವರು, ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಜಯ ಕರ್ನಾಟಕ ಸಂಘಟನೆ ಗುರುಮಠಕಲ್ ತಾಲೂಕು ಘಟಕದ ವತಿಯಿಂದ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

20
1153 views

Comment