ಮೇ 22ರಿಂದ ಮೈಸೂರಿನಲ್ಲಿ ಗ್ರೀಷ್ಮ ರಂಗೋತ್ಸವ
ಮೈಸೂರು, ಮೇ. 21: ಚಲನ ಮೈಸೂರು ತಂಡದ ವತಿಯಿಂದ ಮೇ 22ರಿಂದ 24ರವರೆಗೆ ಕಲಾಮಂದಿರ ಕಿರು ರಂಗಮಂದಿರದಲ್ಲಿ “ಗ್ರೀಷ್ಮ ರಂಗೋತ್ಸವ” ಆಯೋಜಿಸಲಾಗಿದೆ ಎಂದು ತಂಡದ ಮುಖ್ಯಸ್ಥ ದೀಪಕ್ ಮೈಸೂರು ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಉದ್ಧವ ಕಲಾವಿದರು, ಅರಳಿ ಸೇವಾ ಟ್ರಸ್ಟ್, ತಮ್ಮ ಮೈಸೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದರು.
ಮೇ 22ರಂದು ಸಂಜೆ 6.30ಕ್ಕೆ ಉತ್ಸವ ಉದ್ಘಾಟನೆಯಾಗಲಿದ್ದು, ಶಾಸಕ ಹರೀಶ್ ಗೌಡ, ಡಾ. ಡಿ.ಬಿ. ಲಿಂಗರಾಜು, ನಿರ್ಮಲ ಮಠಪತಿ, ರಕೋಟಿ ಹಾಗೂ ಶಾಂತ ಉಪಸ್ಥಿತರಿರುವರು. ಉದ್ಘಾಟನಾ ಕಾರ್ಯಕ್ರಮದ ಬಳಿಕ ನಾಟ್ಯ ವೈಭವ ಸೆಂಟ್ರಲ್ ಕಾಲೇಜು ವಿದ್ಯಾರ್ಥಿಗಳಿಂದ ಪ್ರಕಾಶ್ ಜಿ. ರಚನೆಯ “ನನ್ಸಿರಿ” ನಾಟಕ ಪ್ರದರ್ಶನ ನಡೆಯಲಿದೆ. ಮೇ 23ರಂದು ಸಂಜೆ 6.30ಕ್ಕೆ ಜನಮನ ಸಾಂಸ್ಕೃತಿಕ ಸಂಘಟನೆ ವತಿಯಿಂದ ಖ್ಯಾತ ಸಾಹಿತಿ ದೇವನೂರು ಮಹಾದೇವ ಅವರ ಕೃತಿಯನ್ನು ಆಧರಿಸಿದ “ಸಂಬಂಜ ಅನ್ನೋದು ದೊಡ್ಡದು ಕಣಾ” ನಾಟಕ ಪ್ರದರ್ಶನವಾಗಲಿದೆ. ಮೇ 24ರಂದು ಸಂಜೆ 6.30ಕ್ಕೆ ಆಸೀಫ್ ಕ್ಷತ್ರಿಯ ರಚನೆಯ ಎರ್ಡ್ರೆಡ್ಲ್ಯಾ ಐದು ನಾಟಕವನ್ನು ಆಯೋಜಕ ತಂಡವೇ ಪ್ರದರ್ಶಿಸಲಿದೆ. ಎಲ್ಲಾ ನಾಟಕಗಳಿಗೆ ಪ್ರವೇಶ ಉಚಿತವಾಗಿದ್ದು, ಪ್ರೇಕ್ಷಕರು ಇಚ್ಛೆಯಂತೆ ಪ್ರೋತ್ಸಾಹಧನ ನೀಡಬಹುದಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಚಿತ್ರ ನಿರ್ಮಾಪಕ ಬಾಬು, ಹಿರಿಯ ರಂಗಕರ್ಮಿ ನಾಗೇಂದ್ರ ಪ್ರಸಾದ್, ರಾಧಾ ನಾರಾಯಣಗೌಡ ಹಾಗೂ ಸಾಗರ್ ಉಪಸ್ಥಿತರಿದ್ದರು.